ಸುಬ್ರಾಯ ಚೊಕ್ಕಾಡಿ (ಜೂನ್ ೨೯, ೧೯೪೦) ಕವಿ, ವಿಮರ್ಶಕ, ನಾಟಕಕಾರರಾಗಿ ಕನ್ನಡ ನಾಡಿನಲ್ಲಿ ಪ್ರಸಿದ್ಧರಾಗಿದ್ದಾರೆ. == ಜೀವನ == ಕವಿ, ವಿಮರ್ಶಕ, ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರು ಸುಳ್ಯ ತಾಲ್ಲೂಕಿನ ಚೊಕ್ಕಾಡಿಯಲ್ಲಿ ಜೂನ್ 29, 1940ರ ವರ್ಷದಲ್ಲಿ ಜನಿಸಿದರು. ಅವರ ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯನವರು, ತಾಯಿ ಸುಬ್ಬಮ್ಮನವರು. ಅವರ ಪ್ರಾಥಮಿಕ ಶಿಕ್ಷಣ ಚೊಕ್ಕಾಡಿಯಲ್ಲಿ ನೆರವೇರಿತು. ಪ್ರೌಢ ಶಿಕ್ಷಣ ಪಡೆದದ್ದು ಪಂಜ ಎಂಬಲ್ಲಿ . ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಕನ್ನಡದಲ್ಲಿ ಎಂ.ಎ.ಪದವಿ ಪಡೆದರು. ಸುಬ್ರಾಯ ಚೊಕ್ಕಾಡಿಯವರು ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಶಿಕ್ಷಕ ವೃತ್ತಿ. ಸುಳ್ಯ, ಪೈಲೂರು, ಕುಕ್ಕುಜಡ್ಕ ಶಾಲೆಗಳಲ್ಲಿ 39ವರ್ಷಕಾಲ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು. == ಕವಿ ಹೃದಯ == ತಂದೆ ಯಕ್ಷಗಾನ ಕವಿ, ಭಾಗವತರಾದುದರಿಂದ ಕಿವಿಗೆ ಬೀಳುತ್ತಿದ್ದ ಲಯಬದ್ಧ ಹಾಡುಗಳು, ಹೈಸ್ಕೂಲಿಗೆ ನಡೆದು ಹೋಗುವಾಗ ಕಾಡಿನ ಮಧ್ಯೆ ಕೇಳುತ್ತಿದ್ದ ನೀರಿನ ಝುಳು ಝುಳು ನಾದ, ಹಕ್ಕಿಗಳ ಕೂಗು, ಮರಗಳ ಮರ್ಮರತೆಯಿಂದ ಪ್ರಭಾವಿತರಾಗಿ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಅವರಿಗೆ ಕವನ ಕಟ್ಟುವ ಕಾಯಕ ಪ್ರಾರಂಭವಾಗಿತ್ತು. ತಾವು ಎಳೆವೆಯಿಂದಲೇ ಅನುಭವಿಸಿದ ಕಷ್ಟ ಕಾರ್ಪಣ್ಯದ ದಿನಗಳು, ನೋವಿನ, ಅವಮಾನದ, ಅಸಹಾಯಕತೆಯ ಘಟನೆಗಳಿಗೆ ಅವರು ಪ್ರತಿಭಟನೆಯ ರೂಪ ನೀಡಿದ್ದು ಮೂರ್ತ ಕಾವ್ಯರೂಪದಲ್ಲಿ. ಹೀಗೆ ತಮ್ಮ ಅಂತರಂಗವನ್ನು ಸಂಕೇತ, ಪ್ರತಿಮೆ, ರೂಪಕಗಳ ಮೂಲಕ ಹೊರಹಾಕಿದಾಗ ಕವಿಯೊಬ್ಬನ ಆವಿರ್ಭಾವವಾಯಿತು. ಹೀಗೆ ಮೂಡಿಬಂದ ಕವನಗಳು ನಾಡಿನ ಪ್ರಮುಖ ಪತ್ರಿಕೆಗಳೆಲ್ಲದರಲ್ಲೂ ಪ್ರಕಟಗೊಂಡವು. ಜನಮನಗಳಲ್ಲೂ ನಲಿದವು == ಕವನ ಸಂಕಲನಗಳು == ಸುಬ್ರಾಯ ಚೊಕ್ಕಾಡಿಯವರು ರಚಿಸಿದ ಕವನ ಸಂಕಲನಗಳಲ್ಲಿ ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆ ಸಿಕ್ಕವರು, ಇದರಲ್ಲಿ ಅದು, ಇನ್ನೊಂದು ಬೆಳಗು, ಮಾಗಿಯ ಕೋಗಿಲೆ. ಗೀತೆಗಳು-ಹಾಡಿನ ಲೋಕ, ಬಂಗಾರದ ಹಕ್ಕಿ ಪ್ರಮುಖವಾದದ್ದು. == ವಿಮರ್ಶೆ == ಅವರ ವಿಮರ್ಶೆಗಳಲ್ಲಿ ಕಾವ್ಯ ಸಮೀಕ್ಷೆ, ಕೃತಿಶೋಧ, ಒಳಹೊರಗು ಮತ್ತು ಕಾದಂಬರಿಯಾಗಿ ಸಂತೆಮನೆ ಪ್ರಸಿದ್ಧವಾಗಿವೆ. ಇತರರೊಡನೆ ಅವರ ಸಂಪಾದಿತ ಕೃತಿಗಳೆಂದರೆ : ೧೯೦೧ರಿಂದ ೧೯೭೬ರವರೆಗೆ ದಕ್ಷಿಣ ಕನ್ನಡ ಕಾವ್ಯ. == ಧ್ವನಿ ಸುರುಳಿಗಳಲ್ಲಿ == ಸುಬ್ರಾಯ ಚೊಕ್ಕಾಡಿಯವರ ಬರಹಗಳ ಆಧಾರಿತ ಕ್ಯಾಸೆಟ್ ಹಾಗೂ ಸಿಡಿಗಳಲ್ಲಿ ಮಿಲನ, ಮಾನಸ, ಬೆಣ್ಣೆ ಕದ್ದ ನಮ್ಮ ಕೃಷ್ಣ, ವನಸಿರಿ, ಅನುರಾಗ, ಸಲ್ಲಾಪ, ಹುಣ್ಣಿಮೆ, ನೂಪುರ, ಸಿರಿಗನ್ನಡ, ದೀಪ, ಭಾವ ಚಿತ್ತಾರ, ನಿನ್ನ ಬಾಂದಳದಂತೆ ಪ್ರಖ್ಯಾತಗೊಂಡಿವೆ. == ಸಂದ ಗೌರವಗಳು == ಸುಬ್ರಾಯ ಚೊಕ್ಕಾಡಿಯವರಿಗೆ ಸಂದ ಗೌರವ ಪ್ರಶಸ್ತಿಗಳಲ್ಲಿ ೬೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಸುಳ್ಯ ತಾಲ್ಲೂಕು ೫ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ದಕ್ಷಿಣ ಕನ್ನಡ ಜಿಲ್ಲಾ ೧೫ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ವರ್ಧಮಾನ ಪ್ರಶಸ್ತಿ, ಮುದ್ದಣ ಪ್ರಶಸ್ತಿ, ಮೃತ್ಯುಂಜಯ ಸಾರಂಗ ಮಠ ಪ್ರಶಸ್ತಿ, ಸಾಹಿತ್ಯಕಲಾನಿ ಪ್ರಶಸ್ತಿ, ಕರ್ನಾಟಕ ಶ್ರೀ ಪ್ರಶಸ್ತಿ ಮುಖ್ಯವಾದುವು. ಈ ಗೌರವಾನ್ವಿತ ವ್ಯಕ್ತಿತ್ವಕ್ಕೆ ಹಿರಿಮೆಗೆ ಅರ್ಪಿತವಾದ ಗೌರವಗ್ರಂಥ ‘ಮುಕ್ತ ಹಂಸ.’ == ಮಾಹಿತಿ ಆಧಾರ == ಕಣಜ.